ಕನ್ಯಾಕೀಟ : ಓಡೊನೇಟ ಗಣದ ಜೈóಗಾಪ್ಟೆರ ಉಪಗಣಕ್ಕೆ ಸೇರಿದ ಅನೇಕ ಜಾತಿಯ ಕೀಟಗಳಿಗಿರುವ ಸಾಮಾನ್ಯ ಹೆಸರು. ಪ್ರಪಂಚದಲ್ಲೆಲ್ಲ ಇವುಗಳ ವ್ಯಾಪ್ತಿಯಿದ್ದರೂ ಉಷ್ಣವಲಯದಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ. ಸಾಧಾರಣ ಗಾತ್ರದ ಇವುಗಳ ದೇಹ ತೆಳುವಾಗಿ ಕೋಮಲವಾಗಿವೆ. ಎರಡು ಜೋಡಿ ಸಮರೂಪದ ನವಿರಾದ ಪೊರೆಯಂಥ ರೆಕ್ಕೆಗಳಿವೆ. ಇವುಗಳ ಹಾರಾಟ ದುರ್ಬಲವಾದದ್ದು. ಪ್ರೌಢಜೀವಿಗಳ ಬಣ್ಣ ಮುಬ್ಬಾಗಿರುವುದು ಸಾಮಾನ್ಯ ಲಕ್ಷಣವಾದರೂ ಕೆಲವು ಕೀಟಗಳ ರೆಕ್ಕೆಗಳ ಮೇಲೆ ಕೆಂಪು ಅಥವಾ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ದೇಹ ಮತ್ತು ರೆಕ್ಕೆಗಳು ಮಿರುಗುವ ಹಚ್ಚಹಸುರಿನ ಬಣ್ಣದಿಂದ ಕೂಡಿರುವುದೂ ಉಂಟು.

ಕನ್ಯಾಕೀಟಗಳ ದೇಹವನ್ನು ತಲೆ, ವೃಕ್ಷ ಮತ್ತು ಉದರ ಭಾಗಗಳೆಂದು ವಿಭಾಗಿಸಬಹುದು. ತಲೆಯಲ್ಲಿ ಗುಂಡಗಿನ, ಚೆನ್ನಾಗಿ ಬೆಳೆದ, ಕೊಂಚ ಹೊರಚಾಚಿರುವಂತಿರುವ ಎರಡು ಸಂಯುಕ್ತ ಕಣ್ಣುಗಳೂ ಬಲಯುತವಾದ ಎರಡು ದವಡೆಗಳೂ ಇವೆ. ವಕ್ಷ ಭಾಗದಲ್ಲಿ ಮೂರು ಖಂಡಗಳಿವೆ. ಎರಡನೆಯ ಮತ್ತು ಮೂರನೆಯ ಖಂಡಗಳು ಆಯತಾಕಾರವಾಗಿದ್ದು ಸ್ವಲ್ಪ ಹಿಂದಕ್ಕೆ ಚಾಚಿರುತ್ತವೆ. ಸಮರೂಪದ ರೆಕ್ಕೆಗಳಿವೆ. ರೆಕ್ಕೆಗಳ ಬುಡ ಮಾತ್ರ ಸ್ವಲ್ಪ ಕಿರಿದು. ತೆಳುವಾಗಿ ಪಾರದರ್ಶಕವಾಗಿರುವ ಈ ರೆಕ್ಕೆಗಳ ಮೇಲೆ ಬಲೆಯಂಥ ನರವಿನ್ಯಾಸವಿದೆ. ಕನ್ಯಾಕೀಟಗಳು ನೆಲದ ಮೇಲೆ ಕುಳಿತಾಗ ರೆಕ್ಕೆಗಳು ಅಗಲವಾಗಿ ಹರಡದೆ ಮಡಿಚಿಕೊಂಡು ಎದೆಯ ಭಾಗದಿಂದ ಹಿಂಚಾಚಿಕೊಳ್ಳುವುದು ಇವುಗಳ ವಿಶಿಷ್ಟ ಲಕ್ಷಣ. ವಕ್ಷದ ಮೂರು ಖಂಡಗಳಲ್ಲೂ ಒಂದೊಂದು ಜೊತೆ ಸಂಧಿಪಾದಗಳಿವೆ. ಉದರ ಭಾಗ ಹತ್ತು ಖಂಡಗಳಿಂದ ಕೂಡಿದೆ. ಗಂಡಿನಲ್ಲಿ ಉದರದ ಕೊನೆಯ ಖಂಡದ ತುದಿಯಲ್ಲಿ ಆದಿಗುದದ ತಟ್ಟೆ ಇಲ್ಲ. ಗಂಡಿನ ಉದರದ ಎರಡನೆಯ ಮತ್ತು ಮೂರನೆಯ ಖಂಡಗಳ ತಳಭಾಗದಲ್ಲಿ ಒಂದು ಮೈಥುನಾಂಗ ಮತ್ತು ಅದಕ್ಕೆ ಸಂಬಂಧಿಸಿದ ಒಂದು ಚೀಲವಿದೆ. ಅಲ್ಲದೆ ಸಂಭೋಗಕಾಲದಲ್ಲಿ ಹೆಣ್ಣನ್ನು ಆಲಂಗಿಸಿ ಹಿಡಿದುಕೊಳ್ಳಲು ಸಹಾಯಕವಾಗುವ ಆಲಿಂಗಕಗಳು (ಕ್ಲಾಸ್ಟರ್) ಕೊನೆಯ ಖಂಡದಲ್ಲಿವೆ. ಹೆಣ್ಣಿನ ಉದರಭಾಗದ ಕೊನೆಯಲ್ಲಿ ಜನನೇಂದ್ರಿಯದ ದ್ವಾರದ ಬಳಿ ಚೆನ್ನಾಗಿ ರೂಪುಗೊಂಡ ಅಂಡನಿಕ್ಷೇಪವಿದೆ (ಓವಿಪಾಸಿಟರ್ಸ್‌). ಸಂಭೋಗಕಾಲದಲ್ಲಿ ಗಂಡು ತನ್ನ ಜನನೇಂದ್ರಿಯ ದ್ವಾರದ ಮೂಲಕ ಬಂದ ಶುಕ್ರಾಣುಗಳನ್ನು ಮೈಥುನಾಂಗದ ಬಳಿಯಿರುವ ಚೀಲಕ್ಕೆ ತುಂಬಿಕೊಳ್ಳುತ್ತದೆ. ಅನಂತರ ಅದು ತನ್ನ ಆಲಿಂಗಕಗಳ ಸಹಾಯದಿಂದ ಹೆಣ್ಣಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಯಾವುದಾದರೂ ಜಲಸಸ್ಯದ ರೆಂಬೆಗಳನ್ನು ತನ್ನ ಕಾಲುಗಳಿಂದ ಬಿಗಿಯಾಗಿ ಹಿಡಿಯುತ್ತದೆ. ಹೆಣ್ಣುಕೀಟ ತನ್ನ ದೇಹವನ್ನು ಕಮಾನಿನಂತೆ ಬಾಗಿಸಿಕೊಂಡು ತನ್ನ ಜನನೇಂದ್ರಿಯ ದ್ವಾರವನ್ನು ಗಂಡಿನ ಮೈಥುನಾಂಗದ ಬಳಿಗೆ ಸಾಗಿಸಿ ಅದರ ಮೂಲಕ ಶುಕ್ರಾಣುಗಳನ್ನು ಸ್ವೀಕರಿಸುತ್ತದೆ. ಅನಂತರ ಹೆಣ್ಣು ಅದೇ ಭಂಗಿಯಲ್ಲಿ ತನ್ನ ಉದರವನ್ನು ಬೇರ್ಪಡಿಸಿಕೊಂಡು ಗಿಡದ ರೆಂಬೆಯನ್ನು ಬಲವಾಗಿ ಹಿಡಿದುಕೊಂಡು ತನ್ನ ಅಂಡನಿಕ್ಷೇಪದ ಸಹಾಯದಿಂದ ಗಿಡದ ಮೃದುತೊಗಟೆಯನ್ನು ತೂತುಮಾಡಿ ತನ್ನ ಗರ್ಭಾಂಕುರಿತ ಅಂಡಾಣುಗಳನ್ನು ಇಡುತ್ತದೆ. ಹೆಣ್ಣು ಮೊಟ್ಟೆಗಳನ್ನು ಇಡುವವರೆಗೂ ಗಂಡು ತನ್ನ ಹಿಡಿತವನ್ನು ಸಾಮಾನ್ಯವಾಗಿ ಸಡಿಲಿಸುವುದಿಲ್ಲ.

ಮೊಟ್ಟೆಯಿಂದ ಹೊರಬಂದ ಮರಿಗಳು ಅಥವಾ ಡಿಂಭಗಳು ನೀರಿನ ಪರಿಸರ ದಲ್ಲಿಯೇ ಜೀವಿಸುತ್ತವೆ. ಇವುಗಳಿಗೆ ನೆಯಾಡ್ಗಳೆಂದು ಹೆಸರು. ಮಾಂಸಾಹಾರಿಗಳಾದ ಇವು ಸೊಳ್ಳೆಮರಿ, ಇತರ ಸೂಕ್ಷ್ಮ ಕಠಿಣಚರ್ಮಿಗಳನ್ನು ತಿಂದು ಜೀವಿಸುತ್ತವೆ. ಇವುಗಳ ದೇಹವೂ ಬಹಳ ತೆಳುವಾಗಿದ್ದು ದುರ್ಬಲವಾಗಿರುತ್ತದೆ. ಈ ಜಲಜೀವನ ಸು. 1 ವರ್ಷ ಕಾಲ ಸಾಗುತ್ತದೆ. ಈ ಕಾಲದಲ್ಲಿ 10-15 ಬಾರಿ ಇವು ತಮ್ಮ ಹೊರಕವಚವನ್ನು ವಿಸರ್ಜಿಸಿಕೊಂಡು ದೊಡ್ಡದಾಗುತ್ತವೆ. ರೆಕ್ಕೆಗಳಿಲ್ಲದ ಈ ಡಿಂಭಗಳ ದೇಹದ ಕೊನೆಯಲ್ಲಿ ದೋಣಿಯ ಹುಟ್ಟಿನ ಆಕಾರದ ಮೂರು ದೊಡ್ಡ ಶ್ವಸನನಾಲಿ ಕಿವಿರು (ಟ್ರಾಕಿಯಲ್ ಗಿಲ್ಸ್‌) ಗಳಿರುವುದು ಒಂದು ವೈಶಿಷ್ಟ್ಯ. ಇವು ನೀರಿನಲ್ಲಿ ಉಸಿರಾಡಲು ನೆರವಾಗುತ್ತವೆ. ಪ್ರೌಢಜೀವಿ ರೂಪುಗೊಳ್ಳುವುದಕ್ಕೆ ಪುರ್ವಭಾವಿಯಾಗಿ ಈ ಜಲವಾಸಿ ಡಿಂಭದ ಜೀವನ ಚಟುವಟಿಕೆ ಕುಂಟುತ್ತದೆ. ಪ್ರೌಢಜೀವಿಯ ರೆಕ್ಕೆಗಳು ಒಳಗೆ ರೂಪುಗೊಂಡ ಮೇಲೆ ಹಾಗೂ ಇತರ ಅಂಗಗಳ ರಚನೆಯಾದ ಮೇಲೆ ಡಿಂಭ ನೀರಿನಿಂದ ಹೊರಬಂದು ಒಂದು ಮರದ ನೆಲೆಯ ಮೇಲೆ ತಂಗುತ್ತದೆ. ಅದರ ಕವಚದ ಪರೆ ಒಣಗಿದ ಮೇಲೆ ಅದು ಬಿರಿದು ಅದರೊಳಗಿನಿಂದ ಪ್ರೌಢಜೀವಿ ಹೊರಬಂದು ಹಾರಲಾರಂಭಿಸುತ್ತದೆ. 
(ಬಿ.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ